ಹೂವೊಂದನ್ನು ಮುಡಿದುಕೊಳ್ಳಲು, ದೇವರಿಗೆ ಪೂಜೆಗಾಗಿ ಅರ್ಪಿಸಲು, ಅಲಂಕಾರಕ್ಕಾಗಿ ಬಳಸುವುದು ಎಲ್ಲರಿಗೂ ಗೊತ್ತಿರುವ ಸಂಗತಿಗಳೇ. ಆದರೆ ನಿಮಗೆ ಹೂಗಳಿಂದ ತಯಾರಿಸಬಲ್ಲ ಆಹಾರಗಳ ಬಗ್ಗೆ ತಿಳಿದಿದೆಯಾ ? ಹೂವುಗಳಿಂದ ಕೇವಲ ಕಂಗಳಿಗೊಂದೇ ಅಲ್ಲ. ನಾಲಿಗೆಗೂ ಹಬ್ಬವೇ. ಮೈಂಡ್ ರೀಫ್ರೇಶ್ ಮಾಡಬಲ್ಲ ಚಹಾ, ಜಡಿಮಳೆಗೆ ಜೊತೆಯಾಗುವ ಬಿಸಿಬಿಸಿ ಪಕೋಡಾ, ಅನ್ನದೊಟ್ಟಿಗೆ ತಿನ್ನುವ ತಂಬುಳಿ, ರಸಂ, ಚಪಾತಿಯ ಜೊತೆಯಾಗುವ ಚಟ್ನಿ, ಪಲ್ಯ ಹೀಗೇ ಬಗೆಬಗೆಯ ರುಚಿರುಚಿ ತಿಂಡಿಗಳನ್ನು ಹೂವುಗಳಿಂದ ಮಾಡಬಹುದು.
ನಮ್ಮ ಕರ್ನಾಟಕದಲ್ಲಿ ಗುಲಾಬಿ ಹೂವಿನಿಂದ ಗುಲ್ಕನ್, ನುಗ್ಗೆ ಮತ್ತು ಪಪ್ಪಾಯ ಹೂವುಗಳಿಂದ ಪಲ್ಯವನ್ನು ಮಾಡುತ್ತಾರೆ. ಬಾಳೆ ಹೂವಿನ ಪಲ್ಯವನ್ನೂ ಮಾಡುತ್ತಾರೆ. ಇದಕ್ಕೆ ಕೇರಳದಲ್ಲಿ ಕೇರಳದಲ್ಲಿ ಇದನ್ನು ‘ವಾಳಕ್ಕೂಂಬ್ ತೋರನ್’ ಎಂದು ಕರೆಯುತ್ತಾರೆ. ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಅಲ್ಲಿನ ಹವಾಮಾನ ಮತ್ತು ಸಂಸ್ಕೃತಿಗೆ ತಕ್ಕಂತೆ, ಅಲ್ಲ ಬೆಳೆಯುವ ಬೇರೆ ಬೇರೆ ರೀತಿಯ ಹೂವುಗಳನ್ನು ಬಳಸಿ ಭಿನ್ನಭಿನ್ನ ಪಾಕವನ್ನು ಮಾಡುತ್ತಾರೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಕುಂಬಳಕಾಯಿ ಹೂವುಗಳನ್ನು ಗಸಗಸೆ ಅಥವಾ ಕಡಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕರಿಯುವ ‘ಕುಮ್ರೋ ಫುಲ್ ಭಾಜಾ’ ಎನ್ನುವ ತಿಂಡಿಯನ್ನೂ, ಪಾರಿಜಾತ ಪುಷ್ಪನ್ನು ಒಣಗಿಸಿ ಅಸ್ಸಾಂ ನಲ್ಲಿ ʼಖಾರ್ʼ ಎಂಬ ಪದಾರ್ಥವನ್ನೂ, ಬಂಗಾಳದಲ್ಲಿ ಅಗಸೆ ಹೂವಿನ ತಳಿಯಾದ ʼಬೊಕ್ ಫುಲ್ʼ ಬಳಸಿ ಗರಿಗರಿಯಾದ ಬಜ್ಜಿಗಳನ್ನು ಮಾಡುತ್ತಾರೆ. ತಮಿಳುನಾಡಿನಲ್ಲಿ ಬೇಸಿಗೆಯಲ್ಲಿ ದೇಹವನ್ನು ತಂಪಿಡಲು ಬೇವಿನ ಹೂವಿನ ‘ವೆಪ್ಪಂಪೂ ರಸಂ’ ಮತ್ತು ಆಂಧ್ರದಲ್ಲಿ ಬಳಸುತ್ತಾರೆ.
ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಜಾರ್ಖಂಡ್ನ ಬುಡಕಟ್ಟು ಪ್ರದೇಶಗಳಲ್ಲಿ ಮಹುವಾ ಹೂವು ಪ್ರಮುಖ ಹೂವಿನ ಬೆಳೆಯಾಗಿದೆ. ಇದನ್ನು ಒಣಗಿಸಿ ಲಡ್ಡು, ಹಲ್ವಾಗಳಂತಹ ಸಿಹಿ ತಿಂಡಿಗಳಿಗೆ ಸಕ್ಕರೆಗೆ ಪರ್ಯಾಯವಾಗಿ ಮತ್ತು ಸಾಂಪ್ರದಾಯಿಕ ಪಾನೀಯಗಳನ್ನು ತಯಾರಿಸಲು ಬಳಸಲಾಗುತ್ತಾರೆ. ಮಧ್ಯ ಭಾರತದ ಕಾಡುಗಳಲ್ಲಿ ಸಿಗುವ ಪಲಾಶ ಎಂಬ ಹೂವಿನಿಂದ ಚಟ್ನಿಯನ್ನು ಮಾಡುತ್ತಾರೆ. ಉತ್ತರ ಭಾರತದಲ್ಲಿ ವಿಶೇಷವಾಗಿ ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಗುಲಾಬಿ ದಳಗಳನ್ನು ಗುಲ್ಕನ್ಡ್, ಶರಬತ್ತುಗಳು ಮತ್ತು ಮುಘಲಾಯಿ ಶೈಲಿಯ ಬಿರಿಯಾನಿ ಅಥವಾ ಸಿಹಿ ತಿಂಡಿಗಳನ್ನು ಸುವಾಸನೆಗೊಳಿಸಲು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ.
ಇತ್ತಿಚಿನ ದಿನಗಳಲ್ಲಿ ಜನರು ಕಾಪಿ ಮತ್ತು ಚಹಾಗಳ ಬದಲಾಗಿ ಹರ್ಬಲ್ ಟೀ, ಕಷಾಯಗಳನ್ನು ಕುಡಿಯಲಿಚ್ಛಿಸುತ್ತಿರುವುದರಿಂದ ಹೂಗಳನ್ನು ಕುದಿಸಿ ಮಾಡುವ ಚಹಾಗಳು ಮುನ್ನೆಲೆಗೆ ಬಂದು ಜನಪ್ರಿಯವಾಗುತ್ತಿವೆ. ಶಂಖಪುಷ್ಪ, ದಾಸವಾಳ, ಬುರಂಶ್, ಲ್ಯಾವೆಂಡರ್, ಮಲ್ಲಿಗೆ, ಕ್ಯಾಮೊಮೈಲ್, ಕಾಶ್ಮೀರಿ ಗುಲಾಬಿ ಇವುಗಳಿಂದ ತಯಾರಿಸುವ ಉಷ್ಣ ಪಾನೀಯಗಳು ಭಾರತದಾದ್ಯಂತ ದಿನೇ ದಿನೇ ಸದ್ದು ಮಾಡುತ್ತಿವೆ. ಜೀರ್ಣಕ್ರಿಯೆಯನ್ನು ಹೆಚ್ಚಿಸವ, ಮನಸ್ಸನ್ನು ಪ್ರಶಾಂತಗೊಳಿಸುವ ಹಾಗೂ ಮಾಡಲು ಸುಲಭವಾದ ಈ ಚಹಾಗಳು ಬಹುತೇಕರನ್ನು ಸೆಳೆಯುತ್ತಿದೆ.
ಹಲವಾರು ಹೂವುಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ನೀರಿನಂಶ ಮತ್ತು ನಾರಿನಂಶ, ವಿಟಮಿನ್ಗಳು, ಖನಿಜಾಂಶಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿರುವುದರಿಂದ ಹೂವುಗಳಿಂದ ಆರೋಗ್ಯ ಉತ್ತಮವಾಗುತ್ತದೆ. ಆದರೆ ಇವತ್ತಿನ ದಿಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಅವು ಹೂಗಳ ಮೂಲಕ ನಮ್ಮ ದೇಹವನ್ನು ಸೇರುವ ಅಪಾಯವೂ ಇದೆ ಮತ್ತು ಹೂಗಳಿಗೆ ಕೃತಕ ಬಣ್ಣಗಳನ್ನು ಬಳಸಿರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನಾವು ಆಹಾರವನ್ನು ತಯಾರಿಸುವಾಗ ಎಚ್ಚರಿಕೆಯನ್ನು ವಹಿಸಬೇಕು.
ಮನೆಯಂಗಳದಿಂದ, ಕೈತೋಟದಿಂದ ಹೆಣ್ಣಿ ಮುಡಿಗೆ, ದೇವಾಲಯಕ್ಕೆ, ದೇವರ ಮನೆಗೆ ಬಂದಿದ್ದ ಹೂವು ಅಡಿಗೆ ಮನೆಯನ್ನೂ ತಲುಪಿದೆ. ತುಸು ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ನಾವೂ ಸಹ ಹೂವಿನ ಆಹಾರಗಳನ್ನು ತಯಾರಿಸಿ, ಸವಿದು, ಉತ್ತಮ ಆರೋಗ್ಯವನ್ನು ಪಡೆದುಕೊಳ್ಳೋಣ. ನೀವೇನಂತೀರಿ ?
