ಶುಕ್ರವಾರ - 18 ಸೆಪ್ಟೆಂಬರ್ 2026
ದೇವಸ್ಥಾನಗಳು

ಚಾಕೊಲೇಟ್ ಅರ್ಪಿಸುವ ವಿಶಿಷ್ಟ ದೇವಾಲಯ ಕೇರಳದ ಅಲ್ಪುಝಾ

ಸಂಪಾದಕೀಯ ತಂಡ September 16, 20264 ನಿಮಿಷ ಓದು
ಚಾಕೊಲೇಟ್ ಅರ್ಪಿಸುವ ವಿಶಿಷ್ಟ ದೇವಾಲಯ ಕೇರಳದ ಅಲ್ಪುಝಾ

ದೇವಾಲಯ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಹೂವು, ಹಣ್ಣು, ತೆಂಗಿನಕಾಯಿ, ಪಂಚಾಮೃತ, ಲಡ್ಡು, ಪಾಯಸ ಮುಂತಾದ ಸಾಂಪ್ರದಾಯಿಕ ನೈವೇದ್ಯಗಳು ನೆನಪಾಗುತ್ತವೆ. ಆದರೆ ಕೇರಳದ ಅಲ್ಪುಝಾ ಜಿಯಲ್ಲಿರುವ ಒಂದು ದೇವಾಲಯಕ್ಕೆ ಹೋದರೆ ಭಕ್ತರಿಗೆ ಎದುರಾಗುವ ದೃಶ್ಯವೇ ಬೇರೆ. ಇಲ್ಲಿ ದೇವರಿಗೆ ಭಕ್ತರು ಅರ್ಪಿಸುವ ವಿಶೇಷ ನೈವೇದ್ಯವೆಂದರೆ ಮಂಚ್ ಚಾಕೊಲೇಟ್..!
ಹೌದು, ಮಕ್ಕಳಿಗೆ ಅಚ್ಚುಮೆಚ್ಚಿನ ಚಾಕೊಲೇಟ್ ದೇವರಿಗೂ ಅಚ್ಚುಮೆಚ್ಚು ಎಂಬ ನಂಬಿಕೆಯೊಂದಿಗೆ ಭಕ್ತರು ಮಂಚ್ ಚಾಕೊಲೇಟ್‌ಗಳನ್ನು ಅರ್ಪಿಸುವ ಈ ವಿಶಿಷ್ಟ ಕ್ಷೇತ್ರವೇ ಥೆಕ್ಕನ್ ಪಳನಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಾಕ್ಷೇತ್ರಂ, ತಲವಾಡಿ. ಜನರಲ್ಲಿ ಈ ಕ್ಷೇತ್ರವು ಪ್ರೀತಿಯಿಂದ ಮಂಚ್ ಮುರುಗನ್ ದೇವಾಲಯ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇಲ್ಲಿನ ಪ್ರಧಾನ ಆರಾಧ್ಯ ದೈವ ಬಾಲಮುರುಗನ್, ಅಂದರೆ ಬಾಲರೂಪದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ.
ಕೆಲವು ಸ್ಥಳೀಯ ಮೂಲಗಳಲ್ಲಿ ದೇವಾಲಯವನ್ನು ತಲವಾಡಿ ಸುಬ್ರಹ್ಮಣ್ಯ ದೇವಾಲಯ ಎಂದೂ ಉಖಿಸಲಾಗಿದೆ. ಅಲ್ಪುಝಾ ನಗರದಿಂದ ಈ ಕ್ಷೇತ್ರಕ್ಕೆ ರಸ್ತೆ ಮೂಲಕ ತೆರಳಬಹುದು. ಈ ದೇವಾಲಯದ ಅತ್ಯಂತ ಕುತೂಹಲಕಾರಿ ಸಂಗತಿಯೇ ಮಂಚ್ ಚಾಕೊಲೇಟ್ ನೈವೇದ್ಯದ ಹಿಂದಿರುವ ಜನಪ್ರಚಲಿತ ಕಥೆ.
ಸ್ಥಳೀಯವಾಗಿ ಹೇಳಲಾಗುವ ಒಂದು ಕಥೆಯ ಪ್ರಕಾರ, ಕೆಲವು ವರ್ಷಗಳ ಹಿಂದೆ ಒಬ್ಬ ಬಾಲಕ ದೇವಾಲಯಕ್ಕೆ ಬರುತ್ತಿದ್ದ. ಒಂದು ಸಂದರ್ಭದಲ್ಲಿ ಆತ ಅಸ್ವಸ್ಥನಾದನು. ಬಾಲಮುರುಗನ ಮೇಲೆ ಅಪಾರ ಭಕ್ತಿ ಹೊಂದಿದ್ದ ಆ ಬಾಲಕ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದನು. ತನ್ನ ಬಳಿ ಇದ್ದ ಮಂಚ್ ಚಾಕೊಲೇಟ್ ಅನ್ನು ಮುರುಗನಿಗೆ ಅರ್ಪಿಸಿದನು. ಆ ಬಾಲಕನ ಆರೋಗ್ಯ ಸುಧಾರಿಸಿದ ನಂತರ, ಈ ಘಟನೆ ಭಕ್ತರ ನಡುವೆ ವಿಶೇಷ ನಂಬಿಕೆಗೆ ಕಾರಣವಾಯಿತು ಎಂದು ಸ್ಥಳೀಯವಾಗಿ ಹೇಳಲಾಗುತ್ತದೆ. ನಂತರ ಮಕ್ಕಳು ಮತ್ತು ವಿದ್ಯಾರ್ಥಿಗಳು ತಮ್ಮ ಇಷ್ಟಾರ್ಥಗಳಿಗಾಗಿ ಮಂಚ್ ಚಾಕೊಲೇಟ್‌ಗಳನ್ನು ಮುರುಗನಿಗೆ ಅರ್ಪಿಸಲು ಆರಂಭಿಸಿದರು.


ಆದರೆ ಈ ಕಥೆಯ ವಿವಿಧ ರೂಪಗಳು ಸ್ಥಳೀಯವಾಗಿ ಪ್ರಚಲಿತದಲ್ಲಿದ್ದು, ಚಾಕೊಲೇಟ್ ನೈವೇದ್ಯದ ನಿಖರ ಆರಂಭದ ಬಗ್ಗೆ ದೇವಾಲಯದ ಅಧಿಕೃತವಾಗಿ ದೃಢಪಡಿಸಿದ ಒಂದೇ ಒಂದು ಕಥೆ ಇಲ್ಲ ಎಂದು ವರದಿಗಳೂ ಸೂಚಿಸುತ್ತವೆ.
ಇಲ್ಲಿನ ಆರಾಧ್ಯ ದೇವರು ಬಾಲಮುರುಗನ್. ಬಾಲರೂಪದಲ್ಲಿರುವ ದೇವರಿಗೆ ಮಕ್ಕಳು ತಮ್ಮ ಮನಸ್ಸಿಗೆ ಹತ್ತಿರವಾದ ವಸ್ತುವನ್ನೇ ಪ್ರೀತಿಯಿಂದ ಅರ್ಪಿಸುವುದು ಈ ಕ್ಷೇತ್ರದ ಭಕ್ತಿಪರಂಪರೆಯ ವಿಶೇಷತೆಯಾಗಿದೆ. ಮಕ್ಕಳು ದೇವರಿಗೆ ಹೂವು ಅಥವಾ ಹಣ್ಣು ಕೊಡುವುದಕ್ಕಿಂತ ತಮ್ಮ ಕೈಯಲ್ಲಿರುವ ನೆಚ್ಚಿನ ಚಾಕೊಲೇಟ್‌ನ್ನೇ ಅರ್ಪಿಸಿದಾಗ, ಆ ಅರ್ಪಣೆಯಲ್ಲಿ ಮಗುವಿನ ನಿರ್ಮಲ ಭಕ್ತಿ ಕಾಣುತ್ತದೆ.
ದೇವರಿಗೆ ಬೆಲೆಬಾಳುವ ವಸ್ತು ಬೇಕಿಲ್ಲ. ಭಕ್ತಿಯಿಂದ ಕೊಟ್ಟದ್ದು ಸಾಕು ಎಂಬ ಭಾವನೆಯನ್ನು ಈ ಸಂಪ್ರದಾಯ ತನ್ನದೇ ಆದ ರೀತಿಯಲ್ಲಿ ಸಾರುತ್ತದೆ. ಇದರಿಂದಲೇ ಈ ದೇವಾಲಯ ಮಕ್ಕಳೊಂದಿಗೆ ವಿಶೇಷವಾದ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದೆ. ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಬಂದು ಮುರುಗನಿಗೆ ಮಂಚ್ ಅರ್ಪಿಸಿ, ಉತ್ತಮ ಫಲಿತಾಂಶಕ್ಕಾಗಿ ಪ್ರಾರ್ಥಿಸುವ ಪದ್ಧತಿಯೂ ಪ್ರಸಿದ್ಧವಾಗಿದೆ.
ಈ ದೇವಾಲಯದ ಮತ್ತೊಂದು ವಿಶೇಷತೆ ಎಂದರೆ, ಭಕ್ತರು ದೇವರಿಗೆ ಅರ್ಪಿಸಿದ ಮಂಚ್ ಚಾಕೊಲೇಟ್‌ನ ಒಂದು ಭಾಗವನ್ನು ನಂತರ ಪ್ರಸಾದವಾಗಿ ಭಕ್ತರಿಗೆ ಮರಳಿ ನೀಡಲಾಗುತ್ತದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಲಡ್ಡು, ಪಾಯಸ, ಹಣ್ಣು, ಪಂಚಾಮೃತ ಅಥವಾ ಸಿಹಿತಿಂಡಿ ಪ್ರಸಾದವಾಗಿ ದೊರೆಯುತ್ತದೆ. ಆದರೆ ಇಲ್ಲಿ ಭಕ್ತರ ಕೈಗೆ ಮಂಚ್ ಚಾಕೊಲೇಟ್ ಪ್ರಸಾದವಾಗಿ ಬರುವುದು ಅಪರೂಪದ ದೃಶ್ಯ. ಹೀಗಾಗಿ ಇಲ್ಲಿ ಚಾಕೊಲೇಟ್ ಕೇವಲ ಒಂದು ಸಿಹಿತಿಂಡಿಯಲ್ಲ. ಭಕ್ತನ ಪ್ರಾರ್ಥನೆ, ದೇವರ ಮೇಲಿನ ನಂಬಿಕೆ ಮತ್ತು ಬಾಲಭಕ್ತಿಯ ಸಂಕೇತವಾಗಿ ಕಾಣುತ್ತದೆ.
೨೦೧೪ರ ವರದಿಗಳಲ್ಲಿಯೂ ಈ ದೇವಾಲಯದಲ್ಲಿ ಚಾಕೊಲೇಟ್‌ಗಳನ್ನು ಮುರುಗನಿಗೆ ಅರ್ಪಿಸಿ, ಪೂಜೆಯ ನಂತರ ಅವುಗಳ ಒಂದು ಭಾಗವನ್ನು ಪ್ರಸಾದವಾಗಿ ಭಕ್ತರಿಗೆ ನೀಡುವ ಸಂಪ್ರದಾಯದ ಬಗ್ಗೆ ಉಖಿಸಲಾಗಿದೆ. ಈ ದೇವಾಲಯಕ್ಕೆ ಮಕ್ಕಳು ಮಾತ್ರವಲ್ಲದೆ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ವಿಶೇಷವಾಗಿ ಪರೀಕ್ಷಾ ಸಮಯದಲ್ಲಿ ತಮ್ಮ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗಲಿ, ಮನಸ್ಸಿಗೆ ಏಕಾಗ್ರತೆ ದೊರಕಲಿ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲಿ ಎಂಬ ಆಶಯದಿಂದ ಮುರುಗನಿಗೆ ಮಂಚ್ ಅರ್ಪಿಸುವುದು ಕಂಡುಬರುತ್ತದೆ.
ಪುಸ್ತಕ ಹಿಡಿದ ಕೈಯಲ್ಲಿ ಚಾಕೊಲೇಟ್, ಮನಸ್ಸಿನಲ್ಲಿ ಪ್ರಾರ್ಥನೆ, ಕಣ್ಣಲ್ಲಿ ಯಶಸ್ಸಿನ ಕನಸು ಹೊತ್ತ ವಿದ್ಯಾರ್ಥಿಗಳ ಮುಂದೆ ಬಾಲಮುರುಗನ ದರ್ಶನ! ಇಂತಹ ದೃಶ್ಯವೇ ಈ ಕ್ಷೇತ್ರದ ವಿಶಿಷ್ಟತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಈ ಕ್ಷೇತ್ರದ ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಮಂಚ್ ನೈವೇದ್ಯದ ಪರಂಪರೆ ಕೇವಲ ಮಕ್ಕಳಿಗಷ್ಟೇ ಸೀಮಿತವಾಗಿಲ್ಲ. ವಿವಿಧ ಹಿನ್ನೆಲೆಯ ಭಕ್ತರೂ ಇಲ್ಲಿ ಬಂದು ಮುರುಗನಿಗೆ ಚಾಕೊಲೇಟ್ ಅರ್ಪಿಸುತ್ತಾರೆ ಎಂದು ವರದಿಗಳು ಹೇಳುತ್ತವೆ.
ಕಾಲ ಬದಲಾದರೂ ಭಕ್ತಿಯ ಭಾವನೆ ಬದಲಾಗುವುದಿಲ್ಲ ಎಂಬುದಕ್ಕೆ ಈ ದೇವಾಲಯ ಒಂದು ವಿಶಿಷ್ಟ ಉದಾಹರಣೆ. ಸಾಂಪ್ರದಾಯಿಕ ಪೂಜ ಪದ್ಧತಿಯ ಜೊತೆಗೆ ಜನರ ಜೀವನದಲ್ಲಿ ಹೊಸದಾಗಿ ಬೆಳೆದ ವಸ್ತುವೊಂದು ಹೇಗೆ ಭಕ್ತಿಯ ಸಂಕೇತವಾಗಬಹುದು ಎಂಬುದನ್ನು ಈ ಕ್ಷೇತ್ರ ತೋರಿಸುತ್ತದೆ. ಮಂಚ್ ಚಾಕೊಲೇಟ್ ನೈವೇದ್ಯದ ಕಾರಣದಿಂದಲೇ ಬಾಲಮುರುಗನ್ ಇಲ್ಲಿ ಮಂಚ್ ಮುರುಗನ್ ಎಂಬ ಜನಪ್ರಿಯ ಹೆಸರನ್ನು ಪಡೆದಿzರೆ.
ಮುರುಗನಿಗೆ ಹೂವು ಅರ್ಪಿಸುವ ಕ್ಷೇತ್ರಗಳಿವೆ, ಹಣ್ಣು ಅರ್ಪಿಸುವ ಕ್ಷೇತ್ರಗಳಿವೆ, ಪಾಯಸ ಅರ್ಪಿಸುವ ಕ್ಷೇತ್ರಗಳಿವೆ ಆದರೆ ಚಾಕೊಲೇಟ್ ಅರ್ಪಿಸುವ ಮುರುಗನ ಕ್ಷೇತ್ರವೂ ಇದೆ!
ಇದೇ ಕಾರಣಕ್ಕೆ ಅಲ್ಪುಝಾಕ್ಕೆ ಬರುವ ಪ್ರವಾಸಿಗರು ಮತ್ತು ಭಕ್ತರಲ್ಲಿ ಈ ದೇವಾಲಯದ ಬಗ್ಗೆ ವಿಶೇಷ ಕುತೂಹಲ ಮೂಡಿದೆ. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಲತಾಣಗಳಲ್ಲಿಯೂ ಮಂಚ್ ಪ್ರಸಾದದ ದೃಶ್ಯಗಳು ಗಮನ ಸೆಳೆದಿವೆ. ಮಂಚ್ ಮುರುಗನ್ ದೇವಾಲಯದ ಕಥೆ ಕೇವಲ ಒಂದು ಚಾಕೊಲೇಟ್‌ನ ಕಥೆಯಲ್ಲ. ಇದು ಮಗುವಿನ ನಿರ್ಮಲ ನಂಬಿಕೆ, ದೇವರ ಮೇಲಿನ ಭಕ್ತಿ ಮತ್ತು ಜನರ ಮನಸ್ಸಿನಲ್ಲಿ ಬೆಳೆದ ಒಂದು ವಿಶಿಷ್ಟ ಆಚರಣೆಯ ಕಥೆ.
ದೇವರಿಗೆ ಅರ್ಪಿಸುವ ವಸ್ತುವಿನ ಬೆಲೆಗಿಂತ ಅದನ್ನು ಅರ್ಪಿಸುವ ಮನಸ್ಸಿನ ಶುದ್ಧತೆಯೇ ಮುಖ್ಯ ಎಂಬ ಸಂದೇಶವನ್ನು ಈ ಕ್ಷೇತ್ರ ತನ್ನದೇ ಆದ ರೀತಿಯಲ್ಲಿ ಸಾರುತ್ತದೆ. ಮಗುವಿನ ಕೈಯಲ್ಲಿದ್ದ ಒಂದು ಚಾಕೊಲೇಟ್, ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ಮಾರ್ಪಟ್ಟಿತು. ಆ ನೈವೇದ್ಯ ಭಕ್ತರಿಗೆ ಪ್ರಸಾದವಾಯಿತು. ಪ್ರಸಾದ ಒಂದು ಸಂಪ್ರದಾಯವಾಯಿತು. ಸಂಪ್ರದಾಯವೇ ದೇವಾಲಯದ ಗುರುತಾಯಿತು. ಅದಕ್ಕಾಗಿಯೇ ಇದು ಕೇವಲ ಮಂಚ್ ಮುರುಗನ್‌ನ ಕಥೆಯಲ್ಲ. ಮಗುವಿನ ಮುಗ್ಧ ಭಕ್ತಿಯಿಂದ ಹುಟ್ಟಿದ ಒಂದು ಸಿಹಿಯಾದ ನಂಬಿಕೆಯ ಕಥೆ!
ಕೇರಳದ ಹಸಿರು ಸೌಂದರ್ಯದ ನಡುವೆ ನೆಲೆಗೊಂಡಿರುವ ಅಲ್ಪುಝಾದ ಈ ವಿಶಿಷ್ಟ ಕ್ಷೇತ್ರಕ್ಕೆ ಭೇಟಿ ನೀಡುವವರಿಗೆ ಬಾಲಮುರುಗನ ದರ್ಶನದ ಜೊತೆಗೆ, ಭಾರತೀಯ ಭಕ್ತಿಪರಂಪರೆ ಎಷ್ಟು ಜೀವಂತವಾಗಿದ್ದು ಕಾಲದೊಂದಿಗೆ ಹೇಗೆ ಹೊಸ ರೂಪಗಳನ್ನು ಅಳವಡಿಸಿಕೊಳ್ಳುತ್ತದೆ ಎಂಬ ಅನುಭವವೂ ದೊರೆಯುತ್ತದೆ.
ಒಂದು ಚಾಕೊಲೇಟ್, ಒಂದು ಪ್ರಾರ್ಥನೆ.. ಒಂದು ನಂಬಿಕೆ. ಇವೆಲ್ಲವೂ ಸೇರಿ ರೂಪಿಸಿದ ವಿಶಿಷ್ಟ ಕ್ಷೇತ್ರ. ಅಲ್ಪುಝಾದ ಮಂಚ್ ಮುರುಗನ್…!
ವಿಳಾಸ : ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಾಕ್ಷೇತ್ರಂ, ತಲವಾಡಿ ರಸ್ತೆ, ತಲವಾಡಿ, ಕಲತ್, ಅಲ್ಪುಝಾ (ಅಲೆಪ್ಪಿ), ಕೇರಳ -೬೮೮೫೨೧, ಭಾರತ.

ಲೇಖನ : ಸನ್ನಿಧಿ. ವಿ.
ಸಂಸ್ಥಾಪಕರು
ಮುಖ್ಯ ಸಂಪಾದಕರು,ನಿಸರ್ಗಸನ್ನಿಧಿ
.


ಹಂಚಿಕೊಳ್ಳಿ ಚಾಕೊಲೇಟ್ ಅರ್ಪಿಸುವ ವಿಶಿಷ್ಟ ದೇವಾಲಯ ಕೇರಳದ ಅಲ್ಪುಝಾ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
ಸನ್ನಿಧಿ ವಿ.

ನಿಸರ್ಗ ಸನ್ನಿಧಿ ಸಂಪಾದಕೀಯ ತಂಡ

ಪ್ರಕೃತಿ, ಪರಿಸರ, ಸಂಸ್ಕೃತಿ ಮತ್ತು ಪರಂಪರೆಯ ಜ್ಞಾನವನ್ನು ಸರಳ ಮತ್ತು ಜವಾಬ್ದಾರಿಯುತ ಕನ್ನಡದಲ್ಲಿ ಓದುಗರಿಗೆ ತಲುಪಿಸುವ ಪ್ರಯತ್ನ.

ನಿಮ್ಮ ಪ್ರತಿಕ್ರಿಯೆ ಬರೆಯಿರಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.

ಮುಂದೆ ಓದಿ

ಸಂಬಂಧಿತ ಲೇಖನಗಳು

ರಾಯರ ಸನ್ನಿಧಿ – ಕೃಪೆಯ ಕಲ್ಪವೃಕ್ಷ
ದೇವಸ್ಥಾನಗಳು

ರಾಯರ ಸನ್ನಿಧಿ – ಕೃಪೆಯ ಕಲ್ಪವೃಕ್ಷ

September 7, 20264 ನಿಮಿಷ ಓದು

ಮಧ್ಯಾರಾಧನೆ ಎಂದರೆ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ; ಅದು ಗುರುಭಕ್ತಿ, ನಂಬಿಕೆ, ಸೇವೆ ಮತ್ತು ಸಾತ್ವಿಕ ಬದುಕಿನ ಸಂದೇಶವನ್ನು ಸಾರುವ ಮಹತ್ವದ ಪರ್ವ. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ನಡೆಯುವ ಮಧ್ಯಾರಾಧನೆಗೆ…

ಪೂರ್ಣ ಲೇಖನ
ಬಬಿಯಾ ಹೋದರೂ ಕಥೆ ಉಳಿಯಿತು!
ದೇವಸ್ಥಾನಗಳು

ಬಬಿಯಾ ಹೋದರೂ ಕಥೆ ಉಳಿಯಿತು!

August 15, 20265 ನಿಮಿಷ ಓದು

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದಲ್ಲಿರುವ ಅನಂತಪುರ ಲೇಕ್ ಟೆಂಪಲ್ ಪ್ರಕೃತಿ, ಪುರಾಣ, ಇತಿಹಾಸ ಮತ್ತು ನಂಬಿಕೆ. ಈ ನಾಲ್ಕನ್ನೂ ಒಂದೇ ಜಗದಲ್ಲಿ ಬೆಸೆದುಕೊಂಡಿರುವ ಅಪರೂಪದ ಕ್ಷೇತ್ರ. ಸರೋವರದ ಮಧ್ಯದಲ್ಲಿ ನೆಲೆಸಿರುವ ಈ ದೇವಾಲಯದ…

ಪೂರ್ಣ ಲೇಖನ
ಉತ್ತರ ಕನ್ನಡದ ಆರೋಗ್ಯ ದೇವಾಲಯ
ದೇವಸ್ಥಾನಗಳು

ಉತ್ತರ ಕನ್ನಡದ ಆರೋಗ್ಯ ದೇವಾಲಯ

August 15, 20262 ನಿಮಿಷ ಓದು

ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ ತಾಲ್ಲೂಕಿನ ಮುಟ್ಟಾ ಗ್ರಾಮದ ಕರವಾ ಕ್ರಾಸ್‌ನಲ್ಲಿ ನೆಲೆಗೊಂಡಿರುವ ಶ್ರೀ ಧನ್ವಂತರಿ ದೇವಾಲಯವು ಆರೋಗ್ಯ, ಆಯುರ್ವೇದ ಹಾಗೂ ಆಧ್ಯಾತ್ಮಿಕತೆಯ ಸಂಗಮವಾಗಿರುವ ವಿಶಿಷ್ಟ ಕ್ಷೇತ್ರವಾಗಿದೆ. ವೈದ್ಯಶಾಸ್ತ್ರದ ಅಧಿದೇವರೆಂದು ಪೂಜಿಸಲ್ಪಡುವ ಶ್ರೀ…

ಪೂರ್ಣ ಲೇಖನ
ವಾಟ್ಸಾಪ್ ಗುಂಪಿಗೆ ಸೇರಿ
Translate »